ಅಮ್ಮನೊಡಲ ಕೂಸಾಗಿ
ಅಂಬೆಗಾಲ ಮಗುವಾಗಿ
ತೊದಲು ನುಡಿಯ ಕಂದನಾಗಿ
ಕಳೆದು ಹೋದವು ದಿನಗಳವು...
ಜೊತೆಗಿದ್ದ ಮೌನವೇ ನೀನ್ಯಾರು?
ಗುರುಗಳಿಗೆ ಶಿಷ್ಯನಾಗಿ
ಗೆಳೆಯರಿಗೆ ಗೆಳೆಯನಾಗಿ
ಶಾಲೆಯ ಅಂಗಳದಲಿ
ಚಟುವಟಿಕೆಯ ಹುಡುಗನಾಗಿ
ಉರುಳಿಹೋಯಿತು ಬಾಲ್ಯವಂದು....
ಜೊತೆಗಿದ್ದ ಮೌನವೇ ನೀನ್ಯಾರು??
ಹರೆಯದ ದಿನಗಳಲ್ಲಿ
ಪ್ರೇಮಾಂಕುರವಾಗಿ
ಮದುವೆಯಾಗಿ, ಮಕ್ಕಳಾಗಿ
ಯೌವನವು ಕಳೆದಿರಲು
ಜೊತೆಗಿದ್ದ ಮೌನವೇ ನೀನ್ಯಾರು?
ಸನ್ಮಾನವು ನಡೆದಾಗ
ಅಪಮಾನವಾದಾಗ
ನಾ ನಕ್ಕು ನಲಿದಾಗ
ನಾ ಅತ್ತು ಕುಳಿತಾಗ
ಜೊತೆಗಿದ್ದ ಮೌನವೇ ನೀನ್ಯಾರು?
ಮುಪ್ಪಿಂದು ಆವರಿಸಿ
ಕಣ್ಣುಗಳು ಮಂಜಾಗಿ
ಕಿವಿಗಳೆರಡು ಕಿವುಡಾಗಿ
ದೆಹಬಾಗಿ ಹಣ್ಣಾಗಲು
ಜೊತೆಗುಳಿದ ಮೌನವೇ ನೀನ್ಯಾರು??
ಬಾಲ್ಯವೂ ಹೋಯಿತು
ಯೌವ್ವನವೂ ಮುಗಿಯಿತು
ಮಾನಪಮಾನಗಳ ಎಲ್ಲೆ ದಾಟಿ
ಮುಪ್ಪಿನಡಿ ನಾ ನಿಂತಿರಲು
ಜೊತೆಯಲ್ಲಿ ಬಂದವನು ನೀನೊಬ್ಬನೇ,
ಓ ಮೌನವೇ ನೀನ್ಯಾರು?
ಆದಿಯಿಂದ ಅಂತ್ಯದಾಚೆ
ಜನನದಿಂದ ಮರಣದಾಚೆ
ಜೊತೆಗುಳಿಯುವ ಮೌನವೇ ನಿ ಪ್ರಾಣವಾ?
ನಿ ಆತ್ಮವಾ? ನೀನೇ ಪರಮತ್ಮವಾ?
ಹೇಳು ಮೌನವೇ ನೀನ್ಯಾರು??
No comments:
Post a Comment