Friday, December 8, 2017

ಪ್ರಾರ್ಥನೆ

ಬೀಜವೊಂದು ಕಾದು ಕುಳಿತಿದೆ
ಮಣ್ಣಿನಲಿ ಮರವಾಗುವ ಕನಸ ಹೊತ್ತು,
ಮಳೆ ಸುರಿಸುವೆಯ ಓ ಮೊಡವೆ...

ಹನಿಯೊಂದು ಕಾದು ಕುಳಿತಿದೆ
ಚಿಪ್ಪಿನಲಿ ಮುತ್ತಾಗುವ ಕನಸ ಹೊತ್ತು,
ಪೊರೆಯುವೆಯ ಓ ಸಾಗರವೆ...

ಶಿಲೆಯೊಂದು ಕಾದು ಕುಳಿತಿದೆ
ಬೆಟ್ಟದಡಿ ಶಿಲ್ಪವಾಗುವ ಕನಸ ಹೊತ್ತು,
ಕಡಿಯುವೆಯ ಓ ಶಿಲ್ಪಿಯೇ...

ಮೊಗ್ಗೊಂದು ಕಾದು ಕುಳಿತಿದೆ
ಎಲೆಯಡಿ ಕಾಯಾಗುವ ಕನಸ ಹೊತ್ತು,
ಬೆಳೆಸುವೆಯ ಓ ಮರವೆ...

ಮಧುವೊಂದು ಕಾದು ಕುಳಿತಿದೆ
ಹೂವಿನಲಿ ಜೇನಾಗುವ ಕನಸ ಹೊತ್ತು,
ಹೀರುವೆಯಾ ಓ ದುಂಬಿಯೆ...

ಎನ್ನ ಮಗುವೊಂದು ಕಾದು ಕುಳಿತಿದೆ
ಗರ್ಭದಲಿ ಜಗವ ಬೆಳಗೊ ಕನಸ ಹೊತ್ತು,
ಕಾಪಾಡುವೆಯ ಓ ದೈವವೇ...

Thursday, December 7, 2017

ಬೇಗ ಬರಬಾರದೇ ಗೆಳತಿ

ಊಟದಲಿ ರುಚಿಯಿಲ್ಲ
ಅಡುಗೆಯಲಿ ಘಮವಿಲ್ಲ
ನೀ ಬಡಿಸುವ ಮೃಷ್ಟಾನಕೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಮನೆಯಲ್ಲಿ ಸೆಲೆಯಿಲ್ಲ     
ಹೊಸ್ತಿಲಲ್ಲಿ ಖಳೆಯಿಲ್ಲ
ನೀ ಬಿಡಿಸುವ ರಂಗೋಲಿಗೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಬಳೆಗಳ ಸದ್ದಿಲ್ಲ
ಕಾಲ್ಗೆಜ್ಜೆಯ ಘಲ್ಲಿಲ್ಲ
ನೀ ಮುಡಿಯುವ ಹೂ ಹಿಡಿದು ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಹಗಲಲ್ಲಿ ರವಿಯಿಲ್ಲ
ಇರುಳಲ್ಲಿ ಶಶಿಯಿಲ್ಲ
ನಿನ ಕಂಗಳ ಹೊಂಬೆಳಕಿಗೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಕಣ್ಣಿನಲಿ ನಿದ್ದೆಯಿಲ್ಲ
ಮೊಗದಲ್ಲಿ ನಗುವಿಲ್ಲ
ನಿನ ವಿರಹ ವೇದನೆಯಲಿ ನಾನಿಲ್ಲಿ ಬೆಂದಿರಲು
ಬೇಗ ಬರಬಾರದೇ ಗೆಳತಿ...

ತವರೂರು ನೆನಪಂತೆ
ತನ್ನೂರು ಕೊನೆಯಂತೆ
ನಿನ ಮನೆಯ ಬಾಗಿಲಲಿ ನಿನಗಾಗಿ ಕಾದಿರಲು
ಬೇಗ ಬರಬಾರದೇ ಗೆಳತಿ...