ತೊರೆಯ ನೆರೆಗೆ ಮಣ್ಣು ಕುಸಿದು
ಕೊಚ್ಚಿಹೊದವು ದಡಗಳೆರಡು,
ಹೊರಡುತಿದೆ ಇರುವೆ ಸಾಲು
ಮನೆಯೆಂಬ ಭರವಸೆಯಲಿ
ಸುಡುಬಿಸಿಲಿಗೆ ಎಲೆಗಳುದುರಿ
ಬರುಡಾಯಿತು ವನ್ಯರಾಶಿ,
ಹಾರುತಿವೆ ಹಕ್ಕಿಗಳು
ಹಸಿರೆಂಬ ಭರವಸೆಯಲಿ
ಬರಗಾಲದ ದವಡೆಯಲ್ಲಿ
ಬಂಜರಾದವು ಹೊಲಗಳೆಲ್ಲ,
ಬಿತ್ತುತಿಹನು ಉಳುವ ಯೋಗಿ
ಮಳೆಯೆಂಬ ಭರವಸೆಯಲಿ
ಮುಳುಗಿಹೋದ ಕೆಂಪು ಸೂರ್ಯ
ಇರುಳಾಯಿತು ಈ ದಿನ,
ಮಲಗುತಿದೆ ಜಗವೆಲ್ಲ
ನಾಳೆಯೆಂಬ ಭರವಸೆಯಲಿ
ನೂರು ಸೋಲು ಮುಂದೆ ಇಟ್ಟು
ಅಣುಕಿಸುತಿದೆ ಜೀವನ,
ಸಾಗುತಿದೆ ಬಾಳದೋಣಿ
ಗೆಲುವೆಂಬ ಭರವಸೆಯಲಿ
ಭರವಸೆಯ ಆಸರೆಯಲಿ
ಬೆಳೆಯುತಿರಲಿ ಕನಸುಗಳು,
ಭರವಸೆಯ ಬೆಳಕಿನಲ್ಲಿ
ಹೊಳೆಯುತಿರಲಿ ಗುರಿಗಳು
3 comments:
chennagi mudi bandide nimma baravaseya kavana...
ನಾಗರಾಜ,
ಮೆಚ್ಚುಗೆಗೆ ಧನ್ಯವಾದಗಳು
ಚೆನ್ನಾಗಿ ಬರೆದಿದ್ದೀಯ :)
Post a Comment