Friday, December 8, 2017

ಪ್ರಾರ್ಥನೆ

ಬೀಜವೊಂದು ಕಾದು ಕುಳಿತಿದೆ
ಮಣ್ಣಿನಲಿ ಮರವಾಗುವ ಕನಸ ಹೊತ್ತು,
ಮಳೆ ಸುರಿಸುವೆಯ ಓ ಮೊಡವೆ...

ಹನಿಯೊಂದು ಕಾದು ಕುಳಿತಿದೆ
ಚಿಪ್ಪಿನಲಿ ಮುತ್ತಾಗುವ ಕನಸ ಹೊತ್ತು,
ಪೊರೆಯುವೆಯ ಓ ಸಾಗರವೆ...

ಶಿಲೆಯೊಂದು ಕಾದು ಕುಳಿತಿದೆ
ಬೆಟ್ಟದಡಿ ಶಿಲ್ಪವಾಗುವ ಕನಸ ಹೊತ್ತು,
ಕಡಿಯುವೆಯ ಓ ಶಿಲ್ಪಿಯೇ...

ಮೊಗ್ಗೊಂದು ಕಾದು ಕುಳಿತಿದೆ
ಎಲೆಯಡಿ ಕಾಯಾಗುವ ಕನಸ ಹೊತ್ತು,
ಬೆಳೆಸುವೆಯ ಓ ಮರವೆ...

ಮಧುವೊಂದು ಕಾದು ಕುಳಿತಿದೆ
ಹೂವಿನಲಿ ಜೇನಾಗುವ ಕನಸ ಹೊತ್ತು,
ಹೀರುವೆಯಾ ಓ ದುಂಬಿಯೆ...

ಎನ್ನ ಮಗುವೊಂದು ಕಾದು ಕುಳಿತಿದೆ
ಗರ್ಭದಲಿ ಜಗವ ಬೆಳಗೊ ಕನಸ ಹೊತ್ತು,
ಕಾಪಾಡುವೆಯ ಓ ದೈವವೇ...

Thursday, December 7, 2017

ಬೇಗ ಬರಬಾರದೇ ಗೆಳತಿ

ಊಟದಲಿ ರುಚಿಯಿಲ್ಲ
ಅಡುಗೆಯಲಿ ಘಮವಿಲ್ಲ
ನೀ ಬಡಿಸುವ ಮೃಷ್ಟಾನಕೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಮನೆಯಲ್ಲಿ ಸೆಲೆಯಿಲ್ಲ     
ಹೊಸ್ತಿಲಲ್ಲಿ ಖಳೆಯಿಲ್ಲ
ನೀ ಬಿಡಿಸುವ ರಂಗೋಲಿಗೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಬಳೆಗಳ ಸದ್ದಿಲ್ಲ
ಕಾಲ್ಗೆಜ್ಜೆಯ ಘಲ್ಲಿಲ್ಲ
ನೀ ಮುಡಿಯುವ ಹೂ ಹಿಡಿದು ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಹಗಲಲ್ಲಿ ರವಿಯಿಲ್ಲ
ಇರುಳಲ್ಲಿ ಶಶಿಯಿಲ್ಲ
ನಿನ ಕಂಗಳ ಹೊಂಬೆಳಕಿಗೆ ನಾನಿಲ್ಲಿ ಕಾದಿರಲು
ಬೇಗ ಬರಬಾರದೇ ಗೆಳತಿ...

ಕಣ್ಣಿನಲಿ ನಿದ್ದೆಯಿಲ್ಲ
ಮೊಗದಲ್ಲಿ ನಗುವಿಲ್ಲ
ನಿನ ವಿರಹ ವೇದನೆಯಲಿ ನಾನಿಲ್ಲಿ ಬೆಂದಿರಲು
ಬೇಗ ಬರಬಾರದೇ ಗೆಳತಿ...

ತವರೂರು ನೆನಪಂತೆ
ತನ್ನೂರು ಕೊನೆಯಂತೆ
ನಿನ ಮನೆಯ ಬಾಗಿಲಲಿ ನಿನಗಾಗಿ ಕಾದಿರಲು
ಬೇಗ ಬರಬಾರದೇ ಗೆಳತಿ...

Tuesday, November 28, 2017

ನೀನ್ಯಾರು???


ಅಮ್ಮನೊಡಲ ಕೂಸಾಗಿ
ಅಂಬೆಗಾಲ ಮಗುವಾಗಿ
ತೊದಲು ನುಡಿಯ ಕಂದನಾಗಿ
ಕಳೆದು ಹೋದವು ದಿನಗಳವು...
ಜೊತೆಗಿದ್ದ ಮೌನವೇ ನೀನ್ಯಾರು?

ಗುರುಗಳಿಗೆ ಶಿಷ್ಯನಾಗಿ
ಗೆಳೆಯರಿಗೆ ಗೆಳೆಯನಾಗಿ
ಶಾಲೆಯ ಅಂಗಳದಲಿ   
ಚಟುವಟಿಕೆಯ ಹುಡುಗನಾಗಿ
ಉರುಳಿಹೋಯಿತು ಬಾಲ್ಯವಂದು....
ಜೊತೆಗಿದ್ದ ಮೌನವೇ ನೀನ್ಯಾರು??

ಹರೆಯದ ದಿನಗಳಲ್ಲಿ 
ಪ್ರೇಮಾಂಕುರವಾಗಿ 
ಮದುವೆಯಾಗಿ, ಮಕ್ಕಳಾಗಿ 
ಯೌವನವು ಕಳೆದಿರಲು
ಜೊತೆಗಿದ್ದ ಮೌನವೇ ನೀನ್ಯಾರು?

ಸನ್ಮಾನವು ನಡೆದಾಗ
ಅಪಮಾನವಾದಾಗ
ನಾ ನಕ್ಕು ನಲಿದಾಗ
ನಾ ಅತ್ತು ಕುಳಿತಾಗ
ಜೊತೆಗಿದ್ದ ಮೌನವೇ ನೀನ್ಯಾರು?

ಮುಪ್ಪಿಂದು ಆವರಿಸಿ
ಕಣ್ಣುಗಳು ಮಂಜಾಗಿ
ಕಿವಿಗಳೆರಡು ಕಿವುಡಾಗಿ
ದೆಹಬಾಗಿ ಹಣ್ಣಾಗಲು
ಜೊತೆಗುಳಿದ ಮೌನವೇ ನೀನ್ಯಾರು??

ಬಾಲ್ಯವೂ ಹೋಯಿತು
ಯೌವ್ವನವೂ ಮುಗಿಯಿತು
ಮಾನಪಮಾನಗಳ ಎಲ್ಲೆ ದಾಟಿ
ಮುಪ್ಪಿನಡಿ ನಾ ನಿಂತಿರಲು
ಜೊತೆಯಲ್ಲಿ ಬಂದವನು ನೀನೊಬ್ಬನೇ, 
ಓ ಮೌನವೇ ನೀನ್ಯಾರು?

ಆದಿಯಿಂದ ಅಂತ್ಯದಾಚೆ
ಜನನದಿಂದ ಮರಣದಾಚೆ
ಜೊತೆಗುಳಿಯುವ ಮೌನವೇ ನಿ ಪ್ರಾಣವಾ?
ನಿ ಆತ್ಮವಾ? ನೀನೇ ಪರಮತ್ಮವಾ?
ಹೇಳು ಮೌನವೇ ನೀನ್ಯಾರು??

Tuesday, November 7, 2017

ಕನ್ನಡ ರಾಜ್ಯೋತ್ಸವದ ಆಮಂತ್ರಣ

ನನ್ನ ಪ್ರೀತಿಯ ಕನ್ನಡಿಗರೇ,
               ಕೊನೆಗೂ ದಿನ ಬಂತು, ನಾವೆಲ್ಲರೂ ಒಂದೆಡೆ ಸೇರೋ ದಿನ, ಒಬ್ಬರಿಗೊಬ್ಬರು ಪರಿಚಯಿಸಿಕೊಳ್ಳುವ ದಿನ, ಒಟ್ಟಿಗೆ ಸಂಭ್ರಮಿಸುವ ದಿನ, ನಮ್ಮ ನಡುವೆಯೇ ಇರೋ ಪ್ರತಿಭಾವಂತರನ್ನು ಗುರುತಿಸಿ ಗೌರವಿಸೊ ದಿನ, ಪಲಾವಾ ಸಿಟಿಯಲ್ಲಿ ಕನ್ನಡದ ಕಂಪನ್ನು ಹರಡಿಸೋ ದಿನ, ದೂರದ ನಮ್ಮ ಊರುಗಳಲ್ಲಿ ಬಿಟ್ಟು ಬಂದ ಕನ್ನಡದ ಬೇರುಗಳಿಗೆ ಮತ್ತೆ ನೀರುಣಿಸುವ ದಿನ, ಕನ್ನಡದ ನೆಲ ಜಲ ಸ್ವಾಭಿಮಾನಕ್ಕಾಗಿ ದುಡಿದ ಕೋಟಿ ಕೋಟಿ ಮಹನೀಯರಿಗೆ ವಂದಿಸೋ ದಿನ, ಮುಂಬರುವ ನಮ್ಮ ಪೀಳಿಗೆಗೆ ಕನ್ನಡದ ಇತಿಹಾಸವನ್ನು ಕಲಿಸುವ ದಿನ, ತಾಯಿ ಕನ್ನಡಾಂಬೆಯ ಋಣವನ್ನು (ಸ್ವಲ್ಪವಾದರೂ) ತೀರಿಸೊ ದಿನ....
               ಹೌದು ಗೆಳೆಯರೇ, ನಾವೆಲ್ಲರು ಕಾತರದ ಕಣ್ಣುಗಳಿಂದ ಎದುರು ನೋಡುತ್ತಿರುವ ದಿನ ಈವತ್ತು.
ಬನ್ನಿ, ಎಲ್ಲರೂ ಬನ್ನಿ,ಕುಟುಂಬ ಸಮೇತರಾಗಿ ಬನ್ನಿ.
        ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ, ಸಂಭ್ರಮಿಸೋಣ, ಸತ್ಕರಿಸೋಣ, ಕನ್ನಡದ ಸಂಗೀತಕ್ಕೆ ಭಾವುಕರಾಗೋಣ, ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸೋಣ. ಇದು ನಿಮ್ಮದೇ ಕಾರ್ಯಕ್ರಮ, ನಿಮ್ಮದೇ ಸಮಾರಂಭಕ್ಕೆ ನಿಮಗೆ ಆಮಂತ್ರಣ ಬೇಕೆ?????


(ಪಲಾವಾ ಸಿಟಿಯಲ್ಲಿ ನಡೆಸಿದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಬರೆದ ಆಮಂತ್ರಣ)

Tuesday, April 17, 2012

ಭರವಸೆ

ತೊರೆಯ ನೆರೆಗೆ ಮಣ್ಣು ಕುಸಿದು
ಕೊಚ್ಚಿಹೊದವು ದಡಗಳೆರಡು,
ಹೊರಡುತಿದೆ ಇರುವೆ ಸಾಲು
ಮನೆಯೆಂಬ ಭರವಸೆಯಲಿ

ಸುಡುಬಿಸಿಲಿಗೆ ಎಲೆಗಳುದುರಿ
ಬರುಡಾಯಿತು ವನ್ಯರಾಶಿ,
ಹಾರುತಿವೆ ಹಕ್ಕಿಗಳು
ಹಸಿರೆಂಬ ಭರವಸೆಯಲಿ

ಬರಗಾಲದ ದವಡೆಯಲ್ಲಿ
ಬಂಜರಾದವು ಹೊಲಗಳೆಲ್ಲ,
ಬಿತ್ತುತಿಹನು ಉಳುವ ಯೋಗಿ
ಮಳೆಯೆಂಬ ಭರವಸೆಯಲಿ

ಮುಳುಗಿಹೋದ ಕೆಂಪು ಸೂರ್ಯ
ಇರುಳಾಯಿತು ಈ ದಿನ,
ಮಲಗುತಿದೆ ಜಗವೆಲ್ಲ
ನಾಳೆಯೆಂಬ ಭರವಸೆಯಲಿ

ನೂರು ಸೋಲು ಮುಂದೆ ಇಟ್ಟು
ಅಣುಕಿಸುತಿದೆ ಜೀವನ,
ಸಾಗುತಿದೆ ಬಾಳದೋಣಿ
ಗೆಲುವೆಂಬ ಭರವಸೆಯಲಿ

ಭರವಸೆಯ ಆಸರೆಯಲಿ
ಬೆಳೆಯುತಿರಲಿ ಕನಸುಗಳು,
ಭರವಸೆಯ ಬೆಳಕಿನಲ್ಲಿ
ಹೊಳೆಯುತಿರಲಿ ಗುರಿಗಳು

Sunday, October 5, 2008

ನಾ ಶಾಶ್ವತವಾಗಿರಲು...

ನಾನಿರುವ ಈ ನೆಲ, ಇರುವುದು ನಾಳೆಯು
ನಾಕಂಡ ಆಗಸ, ಕಾಣುವುದು ನಾಳೆಯು
ನಾನಡೆವ ಈ ದಾರಿಗೆ, ನಾನಿಲ್ಲ ನಾಳೆ
ನಾನಿಟ್ಟ ಹೆಜ್ಜೆ ಮೇಲೆ, ಮತ್ಯಾರದೊ ಪಯಣ-
ಅಳಿಸಿ ಹಾಕುವುದೇ, ನಾಬಿಟ್ಟು ಹೋದ ಹೆಜ್ಜೆ ಗುರುತು.
ನಾನಾಳಿದ ಸಾಮ್ರಾಜ್ಯಕೆ, ಇನ್ಯಾರದೊ ಒಡೆತನ-
ಕಿತ್ತಿ ಹಾಕುವುದೇ, ನಾಬಿತ್ತಿ ಹೋದ ರಾಮರಾಜ್ಯದ ಫಸಲು.
ಓ ದೇವರೇ.........!! ಹಾಗಾಗದಿರಲು
ನಭ-ನಕ್ಷತ್ರಗಳಿರುವವರೆಗು, ನಾ ಸತ್ತೂ ಸಾಯದಿರಲು
ನಾನೇನು ಮಾಡಲಿ ಹೇಳು.............?

Thursday, March 13, 2008

ಹೇಗೆ ಮರೆಯಲಿ ನಿನ್ನ

ಮೌನದ ಇರುಳಲಿ
ತಣ್ಣನೆ ಹವೆಯಲಿ
ಕುಳಿತಿದೆ ನಾನು
ಕೆರೆಯ ದಡದಲಿ

ನೀರಿನ ನಾದಕೆ
ಮೀನಿನ ನಾಟ್ಯಕೆ
ಮರಳಿತು ಹೃದಯವು
ನಿನ್ನಯ ನೆನಪಿಗೆ

ಎದೆಯಲಿ ಯಾತನೆ
ತಾಳದೆ, ಬಂಧು
ಮರೆಯಲೆ ಬೇಕು
ನಿನ್ನನು ಎಂದು

ಉಕ್ಕಿನ ಕವಚದಿ
ತುಂಬಿದೆ ನೆನಪು
ನನ್ನಲಿ ಉಳಿಸದೆ
ಸ್ವಲ್ಪವು ತುಣುಕು

ಕೆರೆಯ ಮಧ್ಯೆ
ಪೆಟ್ಟಿಗೆ ಬಿಟ್ಟು
ದಡಕೆ ಬರಲು
ಕಷ್ಟ ಪಟ್ಟು

ಮೇಲಕೆ ನೋಡಿದೆ
ನಿಟ್ಟುಸಿರಾಗಿ
ನಗುತಿದೆ ನೀನೆ
ಚಂದಿರನಾಗಿ

ಇನ್ನ್ಹೆಗೆ ಮರೆಯಲಿ
ಗೆಳತಿ ನಿನ್ನ
ನೆನಪಲೆ ಕಳೆಯುವೆ
ಬಾಳನು ಎನ್ನ